ಆನಂದ್, ಮುಲ್ಕ್‍ರಾಜ್
	(1905-2004). ಭಾರತದ ಖ್ಯಾತ ಕಾದಂಬರಿಕಾರ, ಕಥೆಗಾರ, ವಿಮರ್ಶಕ. ಪೆಷಾವರಿನಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ. ತಂದೆ ಸೈನ್ಯದಲ್ಲಿ ಸುಬೇದಾರನಾಗಿದ್ದಾಗ ಕೆಳ ಅಂತಸ್ತಿನ ಮಕ್ಕಳೊಂದಿಗೆ ಬೆರೆತ. ಚಿಕ್ಕಂದಿನಲ್ಲಿಯೇ ಲಲಿತ ಕಲೆಗಳಲ್ಲಿ ಆಸಕ್ತಿ ತೋರಿದ. ಮೊದಲು ಲಾಹೋರ್‍ನಲ್ಲಿ, ಅನಂತರ ಲಂಡನ್, ಕೇಂಬ್ರಿಜ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ. ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಗಳಿಸಿದ. ಪರ್ಷಿಯನ್ ಚಿತ್ರಕಲೆ (1930) ಮತ್ತು ಹಿಂದೂಗಳ ದೃಷ್ಟಿಯಲ್ಲಿ ಕಲೆ (1933) ಎಂಬ ಗ್ರಂಥಗಳು ಅವನ ಪ್ರಾರಂಭದಲ್ಲಿನ ಮನೋಧರ್ಮವನ್ನು ತೋರಿಸುತ್ತವೆ. ದಿ ಗೋಲ್ಡನ್ ಬ್ರೆತ್ (1933) ಎಂಬುದು ಇಕ್ಬಲ್, ಠಾಕೂರ್, ಪೂರನ್ ಸಿಂಗ್, ಸರೋಜಿನಿ ನಾಯ್ಡು ಮತ್ತು ಹರೀಂದ್ರನಾಥ ಚಟ್ಟೋಪಧ್ಯಾಯ--ಇವರ ಕೃತಿಗಳ ಪರಿಶೀಲನಾತ್ಮಕ ವಿಮರ್ಶೆಯನ್ನು ಒಳಗೊಂಡಿದೆ. ಆನಂದನಿಗೆ ವಿದ್ವತ್ತು ಇತ್ತು. ಆದರೆ ಪುಸ್ತಕಗಳಿಗಿಂತ ಸ್ವಂತ ಅನುಭವಗಳ ಪ್ರಭಾವ ಹೆಚ್ಚಾಗಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳು ಮತ್ತು ಭಾರತದ ಸಾಮಾಜಿಕ ಜೀವನದಲ್ಲಿ ಕಳೆದ ಶತಮಾನದಲ್ಲಿ ಆದ ಅಗಾಧ ಬದಲಾವಣೆಗಳು ಇವನ ಕಾದಂಬರಿಗಳಿಗೆ ಸಾಮಗ್ರಿಯನ್ನೂ ಸ್ಫೂರ್ತಿಯನ್ನೂ ಒದಗಿಸಿದುವು. ಮೊದಲ ಮೂರು ಕಾದಂಬರಿಗಳಾದ ಕೂಲಿ (1933) ದಿ ಅನ್‍ಟಚಬಲ್ (1935) ಮತ್ತು ಟು ಲೀವ್ಸ್ ಅಂಡ್ ಎ ಬಡ್ (1937) ಇವುಗಳಲ್ಲಿ ಇವನಿಗೆ ಸುಪರಿಚಿತವಾದ ಭಾರತೀಯ ಜೀವನದ ದೃಶ್ಯಗಳ ಪರಿಶೀಲನಾತ್ಮಕ ನಿರೂಪಣೆಗಳ ಮಾಲೆಯನ್ನೇ ಕಾಣಬಹುದು. ಕಾದಂಬರಿಕಾರನ ಸಹಾನುಭೂತಿಯೆಲ್ಲ ಶ್ರಮಜೀವಿಗಳಲ್ಲಿ, ಸಾಮಾನ್ಯ ಕೂಲಿಕಾರನ ಸಂಕಟಗಳು ಮನ್ನೂನ ಜೀವನದಲ್ಲಿ ಹೃದಯಸ್ಪರ್ಶಿಯಾಗಿ ಚಿತ್ರಿತವಾಗಿವೆ. ಜಾತಿಯ ಅವಿಚಾರ ಭಾವನೆಗಳ ವಿಷಾದಕರ ಪರಿಣಾಮಗಳನ್ನು ಅಸ್ಪøಶ್ಯರನ್ನು ಕುರಿತ ಕಾದಂಬರಿ ಮುಂದಿಡುತ್ತದೆ. ಅಸ್ಪøಶ್ಯ ಹಿಂದೂ ಸಮಾಜದಿಂದ ಹೊರಬೀಳುವುದು, ಹಿಂದೂ ಸಮಾಜದಲ್ಲಿ ಎಲ್ಲರಿಗೂ ನ್ಯಾಯ ಸಮಾನತೆಯನ್ನು ನೀಡಬೇಕೆನ್ನುವ ಗಾಂಧೀವಾದದ ವಿಜಯಕ್ಕೆ ಕಾಯುವುದು, ಹಿಂದಿನ ಸಾಮಾಜಿಕ ಅಡ್ಡಿ ಆತಂಕಗಳನ್ನು ತೊಡೆದು ಹಾಕುವ ಯಂತ್ರಯುಗದ ವಿಜಯಕ್ಕೆ ಕಾಯುವುದು, ಹೀಗೆ ಕಾದಂಬರಿ ಮುಕ್ತಾಯವಾಗಬಹುದಾದ ಮೂರು ರೀತಿಗಳನ್ನು ಇಲ್ಲಿ ಗುರುತಿಸಲಾಗಿದೆ. ಗಾಂಧೀಜಿಯವರ ಉಪದೇಶದಿಂದ ಸ್ಫೂರ್ತಿ ಪಡೆದರೂ ಕಾದಂಬರಿಕಾರ ಯಂತ್ರ ಯುಗದ ಬೆಳೆವಣಿಗೆಯನ್ನು ಗುರುತಿಸುತ್ತಾನೆ. ಭಾರತೀಯ ಜೀವನದ ಈ ನಿರೂಪಣೆ ಇ. ಎಂ. ಫಾರ್‍ಸ್ಟರ್‍ನ ಮೆಚ್ಚಿಗೆ ಪಡೆಯಿತು. ಎರಡು ಎಲೆಗಳು, ಒಂದು ಮೊಗ್ಗು ಅಸ್ಸಾಂನ ಟೀ ತೋಟಗಳಲ್ಲಿನ ಜೀವನದ ಚಿತ್ರ; ಕಾಮ, ಹಿಂಸೆ ಮತ್ತು ಇತರರ ರಕ್ತ ಶೋಷಣೆ -- ಇವುಗಳನ್ನು ಮನಕರಗುವಂತೆ ಚಿತ್ರಿಸುತ್ತದೆ. ಸಹಜವಾಗಿ ಇಂಗ್ಲೆಂಡಿನಲ್ಲಿ ಇದನ್ನು ಖಂಡಿಸಲಾಯಿತು. ಆದರೆ ಕಾದಂಬರಿಕಾರನು ನೋಡುವ ಕಣ್ಣು ಕರಗುವ ಹೃದಯಗಳಿರುವ ಉದಾತ್ತ ಇಂಗ್ಲಿಷ್‍ನವನೊಬ್ಬನನ್ನೂ ಚಿತ್ರಿಸುತ್ತಾನೆ. ತನ್ನನ್ನು ಸುತ್ತಿಕೊಂಡ ಘಟಸರ್ಪದೊಡನೆ ಲೀಲಳ ಹೋರಾಟ ಉದ್ದೇಶಿತ ಪ್ರತಿಮೆಯಾಗಿರಬಹುದು. ಇನ್ನು ಮೂರು ಕಾದಂಬರಿಗಳೂ -- ವಿಲೇಜ್ (1939), ಅಕ್ರಾಸ್ ದಿ ಬ್ಲಾಕ್ ವಾಟರ್ ( 1940) ಮತ್ತು ದಿ ಸ್ವೋರ್ಡ್ ಅಂಡ್ ದಿ ಸಿಕಲ್ (1942) ಕಾದಂಬರಿಕಾರನ ಅನುಕಂಪಪೂರಿತ ದರ್ಶನವನ್ನು ನಿರೂಪಿಸುತ್ತವೆ. ಲಾಲುಸಿಂಗ್ ಇವುಗಳ ನಾಯಕ. ಮೊದಲ ಕಾದಂಬರಿಯಲ್ಲಿ ಸಿಖ್ ಹುಡುಗನ ಬಾಲ್ಯ ಮತ್ತು ಸಂಕಷ್ಟಗಳು ಚಿತ್ರಿತವಾಗಿವೆ. ಹುಡುಗ ಸೂಕ್ಷ್ಮ ಮನಸ್ಸಿನವ, ಅಂತಃಪರೀಕ್ಷಣ ಮನೋಭಾವದವ. ಸಮಾಜದಲ್ಲಿನ ಸನ್ನಿವೇಶಗಳಿಗೆ ಅವನ ಪ್ರತಿಕ್ರಿಯೆ ಕಾದಂಬರಿಕಾರನ ಅಭಿಪ್ರಾಯ. ಎರಡನೆಯದರಲ್ಲಿ 1914-18ರ ಯುದ್ಧದಲ್ಲಿ ಫ್ರಾನ್ಸ್‍ನಲ್ಲಿನ ಧ್ವಂಸಫಲಗಳನ್ನು ನಿರೂಪಿಸುತ್ತದೆ. ಯುದ್ಧವೊಂದು ಅವಿವೇಕ, ಅಪರಾಧ ಎನ್ನುವ ಭಾವನೆಯನ್ನು ಮೂಡಿಸುತ್ತದೆ. ದಿ ಸ್ವೋರ್ಡ್ ದಿ ಸಿಕಲ್ ಎಂಬ ಮೂರನೆಯದು ವಿನಾಶಕರ ಯುದ್ಧ ಮತ್ತು ಭಯಂಕರ ಕ್ರಾಂತಿಗಳೆರಡನ್ನೂ ಸೂಚಿಸುತ್ತದೆ. ಇವನ ಸಣ್ಣ ಕಥೆಗಳಲ್ಲೂ ಸಾಮಾಜಿಕ ಮೌಲ್ಯಗಳ ಪ್ರಜ್ಞೆ ಮತ್ತು ಯಂತ್ರಯುಗ ಮತ್ತು ಸಮತಾವಾದಗಳ ಪ್ರಭಾವವನ್ನು ಕಾಣಬಹುದು. ಕಾದಂಬರಿಕಾರನ ದರ್ಶನ ಯಾವಾಗಲೂ ಉದಾತ್ತವಾದುದು. ಆದರೆ ಇಂಗ್ಲಿಷ್‍ನಲ್ಲಿ ಬರೆಯುವ ಬಹುಮಂದಿ ಭಾರತೀಯ ಲೇಖಕರ ಭಾಷೆಯಂತೆ ಈತನ ಭಾಷೆಯೂ ಕಲಾತ್ಮಕ ದರ್ಶನಕ್ಕೆ ಅಗತ್ಯವಾದ ಸೂಕ್ಷ್ಮತೆ, ಉಜ್ವಲತೆ ಮತ್ತು ಶಕ್ತಿಗಳನ್ನು ಸಾಕಷ್ಟು ಪಡೆದಿಲ್ಲ.							(ಕೆ.ಎ.ಆರ್.)

ಆನಂದರು ಎಂಥ ವಾತಾವರಣದಲ್ಲಿ ಬರಹವನ್ನು ಪ್ರಾರಂಭಿಸಿದರೆಂಬುದನ್ನು ಒಂದು ಸಂಗತಿ ತೋರಿಸುತ್ತದೆ. ಕೂಲಿಯಂಥ ಸೊಗಸಾದ ಕಾದಂಬರಿಯನ್ನು ಹತ್ತೊಂಬತ್ತು ಮಂದಿ ಪ್ರಕಾಶಕರು ಹಿಂದಿರುಗಿಸಿದರು-ಕಾದಂಬರಿ ಚೆನ್ನಾಗಿಲ್ಲ ಎಂದಲ್ಲ, ಈ ವಸ್ತುವಿನ ಮತ್ತು ಅಭಿಪ್ರಾಯಗಳ ಕಾದಂಬರಿಯನ್ನು ಓದುಗರೂ ವಿಮರ್ಶಕರೂ ಸ್ವೀಕರಿಸುವುದಿಲ್ಲ ಎಂದು. 
ವ್ಯಕ್ತಿಯ ಆವರಣವು ಅವನ ವರ್ತನೆಯನ್ನು ರೂಪಿಸುವ ಪ್ರಭಾವಗಳಲ್ಲಿ ಬಹು ಮುಖ್ಯವಾದದ್ದು ಎಂದು ಆನಂದರ ನಂಬಿಕೆ. ಆದುದರಿಂದಲೇ ಕಥಾವಸ್ತುವಿನ ಬಹು ಮುಖ್ಯ ಅಂಶ ಸಾಮಾಜಿಕ ಅರಿವು. ಸಮಾಜದ ಒತ್ತಡ ಮತ್ತು ನಿಯಂತ್ರಣ ಇವು ವ್ಯಕ್ತಿಯ ಬದುಕನ್ನು ಇವರ ಕಾದಂಬರಿಗಳಲ್ಲಿ ರೂಪಿಸುತ್ತದೆ. ಸಾಮಾಜಿಕ ವಾಸ್ತವವನ್ನು ಪ್ರತಿಬಿಂಬಿಸುವುದು ಇವರ ಉದ್ದೇಶ. ಆನಂದರು ಜನಸಾಮಾನ್ಯರಲ್ಲಿ ಒಬ್ಬರಾಗಿ, ಜನಸಾಮಾನ್ಯರ ವಿಷಯವಾಗಿ ಜನಸಾಮಾನ್ಯರಿಗಾಗಿ ಬರೆದರು ಎಂದು ವಿಮರ್ಶಕರು ಹೇಳಿದ್ದಾರೆ. ಅವರಿಗೆ ಭಾರತೀಯ ಕಾದಂಬರಿಕಾರರು ಬಹುಮಟ್ಟಿಗೆ ಕಡೆಗಣಿಸಿದ್ದ ಭಾರತೀಯರ ಬದುಕನ್ನು ಕುರಿತು ಅವರು ಬರೆದರು. ಅವರ ಬಹು ಪ್ರಸಿದ್ಧ ಕಾದಂಬರಿ ದಿ ಅನ್‍ಟಚಬಲ್ ಅಸ್ಪøಶ್ಯ ಹುಡುಗನೊಬ್ಬನ ಕಣ್ಣುಗಳ ಮತ್ತು ಮನಸ್ಸುಗಳ ಮೂಲಕ ಅಸ್ಪøಶ್ಯದ ಬದುಕನ್ನು ಸಮಾಜವನ್ನು ಕಾಣುವ ಪ್ರಯತ್ನ. ಈ ಹುಡುಗ ಬಾಖಾನನ್ನು ಆದರ್ಶವ್ಯಕ್ತಿಯನ್ನಾಗಿ ಚಿತ್ರಿಸುವ ಉದ್ದೇಶ ಇಲ್ಲಿಲ್ಲ. ಇಡೀ ಕಾದಂಬರಿಯ ಕ್ರಿಯೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅಡಕವಾಗಿದೆ. ಒಂದು ಇಡೀ ಸಮುದಾಯದ ಬದುಕಿನ ಸ್ವರೂಪವನ್ನು ಇಪ್ಪತ್ನಾಲ್ಕು ಘಂಟೆಗಳಲ್ಲಿ ಅಡಕ ಮಾಡುವ ತಂತ್ರ ವಿಶಿಷ್ಟವಾದದ್ದು. ಈ ಕಾದಂಬರಿಗೆ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ವಿಮರ್ಶಕ ಇ.ಎಂ.ಫಾರ್‍ಸ್ಟರ್ ಮುನ್ನುಡಿಯನ್ನು ಬರೆದ.

ಆನಂದರು ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ದಿ ಓಲ್ಡ್ ವಿಮೆನ್ ಅಂಡ್ ದಿ ಕೌ ದಿ ರೋಡ್, ಡೆತ್ ಆಪ್ ಎ ಹೀರೋ ಇವುಗಳಲ್ಲಿ ಕೆಲವು. ಆತ್ಮವೃತ್ತವಾದ ಕಾದಂಬರಿ ಮಾರ್ನಿಂಗ್ ಫೇಸ್ (1969)ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆಯಿತು. 

ಆನಂದರು ಲಲಿತ ಕಲಾ ಅಕಾಡೆಮಿಯ ಮೊದಲನೆಯ ಅಧ್ಯಕ್ಷರು (1966-71) ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಟ್ಯಾಗೋರ್ ಪ್ರೊಫೆಸರ್ ಆಫ್ ಆರ್ಟ್ ಅಂಡ್ ಲಿಟರೇಚರ್ ಆಗಿದ್ದರು (1973-74).

(ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ